ಶನಿವಾರ, ನವೆಂಬರ್ 15, 2008

ಹೀಗೊಂದು ಸಂಜೆ…

ಹೀಗೊಂದು ಸಂಜೆ ಬಿಡುವಾಗಿದ್ದೆ

ಯಾರೂ ಜೊತೆಯಿರದೆ ಹೊರನಡೆದಿದ್ದೆ

ಎಲೆಗಳ ಮೇಲೆ ಹೇಮದ ಲೇಪನ

ಬಿಡಿಸುತಲಿತ್ತು ಸೂರ್ಯನ ಕಿರಣ

ನಸುಬಿಸಿ ಶಾಖವ ರವಿ ಸೂಸಿದ್ದ

ದಿನವಿಡೀ ದಣಿದು ತಾ ಮುಳುಗುತಲಿದ್ದ

ಸುಂದರ ಸಂಜೆಗೆ ಕೋಗಿಲೆಯುಲಿಯಿತು

ಮನಸಲಿ ನೆಮ್ಮದಿ ತಾ ಬಂದಿಳಿಯಿತು

ಉಳಿದಿಹ ಕೊಂಚ ದುಗುಡವೆಲ್ಲವ

ತಂಗಾಳಿಯು ತಾ ಕದ್ದೊಯ್ದಿತ್ತು.

ಹೀಗೊಂದು ಜೀವನದ ಕಥೆ

ಜೀವನವೆಂಬ ಒಂದೂರಿನಲಿ
ಇತ್ತೊಂದು ಸುಂದರ ಅರಮನೆ
ದೇಹವೆಂಬುದದರಾ ಹೆಸರು
ಇದ್ದುದು ಇಬ್ಬರೆ ಅದರೊಳಗೆ

ಒಬ್ಬನು ಕಾವಲುಗಾರ
ಹೆಸರವನದು ಬುದ್ಧಿಯೆಂದು
ಇನ್ನೊಬ್ಬ ಪುಟ್ಟ ರಾಜಕುಮಾರ
ಹೆಸರವನದು ಮನಸೆಂದು

ಇಬ್ಬರಿಗಿತ್ತು ಬಾಳ್ವೆಯ ನಂಟು
ಸಾಗುತಲಿದ್ದರು ಒಟ್ಟಾಗಿ
ಕಷ್ಟಗಳನೇಕ ಸುಖವದು ಅಲ್ಪ
ಸೇವಿಸುತಿದ್ದರು ಹಿತವಾಗಿ

ಕಷ್ಟವೆಂದೊಬ್ಬ ರಾಕ್ಷಸನೊಮ್ಮೆ
ಬಂದನು ಜೀವನದೂರಿನಲಿ
ದಿಕ್ಕೆಟ್ಟ ಜನರು ನೆರೆದರು ಎಲ್ಲರು
ದೇಹದರಮನೆಯ ಸಮ್ಮುಖದಲ್ಲಿ

ಸಲಹೆಯನಿತ್ತನು ಬುದ್ಧಿಯು ಈಗ
ಬೇಡವೆಂದನು ರಾಜಕುಮಾರ
ಮನಸಿನ ಮಾತನು ಕೇಳಿದ ಕೂಡಲೆ
ಧಿಕ್ಕರಿಸಿದನಾ ಕಾವಲುಗಾರ

ವಾಗ್ವಾದ ನಡೆಯಿತು ಈರ್ವರಲ್ಲಿಯೂ
ಅಂತ್ಯವ ಕಾಣದೆ ಮಾತಿನಲಿ
ಈರ್ವರ ಸಲಹೆಯ ಪ್ರಯೋಗಿಸಿ ನೋಡುವ
ನಿರ್ಧಾರಕೆ ಬಂದರು ಕೊನೆಯಲ್ಲಿ

ಮನಸಿನ ಮಾತದು ನಡೆಯಲೆ ಇಲ್ಲ
ಕಷ್ಟನು ಊರನು ಬಿಡಲಿಲ್ಲ
ಬುದ್ಧಿಯ ಮಾತನು ಕೇಳಿದ ಕಷ್ಟ
ಹೋದವ ತಿರುಗಿಯು ಬರಲಿಲ್ಲ

ಬುದ್ಧಿಯ ಮಾತನು ಕೇಳಿದ ಕಾರಣ
ಜೀವನವೀಗ ಶಾಂತಿಯುತ
ಬೇಸರವಾದರು ಮನಸಿಗೆ ಕೊಂಚ
ಹೊಂದಿಕೊಂಡನು ಕಾಲ ಕಳೆಯುತ್ತ

ರಾಜಕುಮಾರನ ಆತ್ಮೀಯರಿಗೊಮ್ಮೆ
ಕಾಡಿದ ಸಂಕಟ ರಾಕ್ಷಸನು
ವಿಷಯವ ತಿಳಿದ ಬುದ್ಧಿ,ಮನಸು
ನಡೆದರು ಹುಡುಕುತ ಆತ್ಮೀಯರನು

ಮಾತಿನ ಚಕಮಕಿ ಬೇಕಿರಲಿಲ್ಲ
ಪ್ರಯತ್ನಿಸಿದರು ಇಬ್ಬರು ಇಲ್ಲಿ
ಹೋರಾಟಕೆ ಸಂಕಟ ಓಡಿಹೋದನು
ಗೆದ್ದಿದ್ದು ಮನಸಿನ ಮಾತಿಲ್ಲಿ

ಮನಸಿನ ಮಾತಿಗೆ ಬೆಲೆ ಬಂದಿತ್ತು
ಆತ್ಮೀಯರ ವಿಷಯದಲಿ
ಯಾರೇ ಗೆದ್ದರು ಯಾರೇ ಸೋತರು
ಒಟ್ಟಿಗೆ ನಡೆದರು ಬುದ್ಧಿ ಮನಸಿಲ್ಲಿ

ಜೀವನದ ವಿಷಯಕೆ ಬುದ್ಧಿಯ ಮಾತನು
ಆತ್ಮೀಯರ ವಿಷಯಕೆ ಮನಸಿನ ಮಾತನು
ಕೇಳುತ ನಡೆದರೆ ಜೀವನ ಚಂದ!!
ಇರುವುದು ದೇಹದರಮನೆಯೂ ಅಂದ!!

ಮುಂಜಾವು

ಎಲೆ ಎಲೆಯಲ್ಲೂ ಹೂವಿನ ಪಕಳೆಗಳಲ್ಲೂ
ಮೂಡಿದೆ ಪ್ರೀತಿಯ ಇಬ್ಬನಿಯು
ಸವಿಯುತ ದಿನವೂ ಮೇಲೇರಿ ಬರುವ
ಸೂರ್ಯ ನಮ್ಮನ್ನೆಬ್ಬಿಸಲು
ಪ್ರಕೃತಿ ಸೊಬಗನು ಹೊಸ ಮುಂಜಾವನ್ನು
ಬಿಡದೆ ಸವಿಯೊ ಪ್ರತಿ ದಿನವೂ
ಬದುಕಿದು ಕೇವಲ ನಾಲ್ಕು ದಿನಗಳದು
ಮುಗಿದ ಮೇಲೇನಿದೆ ಬಲ್ಲವರಾರು?

ಧ್ಯೇಯ

ನೂರಾರು ಆಸೆ-ಆಕಾಂಕ್ಷೆ..
ನೂರಾರು ಕಥೆ-ಕವನ..
ನೂರಾರು ವಿಚಾರ-ಮಂಥನ..
ನೂರಾರು ಜನ-ಜೀವನ ವಿಧಾನ..
ನಿರತನಾಗಿದ್ದ ಮಾನವ ಎಲ್ಲದರಲ್ಲೂ..
ಯಾಕೋ....
ತಾ ಬದುಕುವುದನ್ನೇ ಮರೆತಿದ್ದ!!

ಸೃಷ್ಟಿ

ಕಳೆಯುವೆ ನಾನು ಎಲ್ಲ ದಿನಗಳ
ಹಗಲೂ ರಾತ್ರಿ ದುಡಿಯುತಲಿ
ಉಳಿಸಿದ ನಿದ್ದೆಯ ಮಾಡಿ ಮುಗಿಸುವೆ
ಒಮ್ಮೆಲೆ ವಾರಾಂತ್ಯದಲಿ

ತಿಂಡಿಯೊ ಊಟವೊ ಯಾವುದು ತಿಳಿಯದು
ಮುಳುಗಿಹೆ ನಾ ಪ್ರಾಜೆಕ್ಟಿನಲಿ
ನನ್ನವರೆಲ್ಲರ ಗಮನವೆ ಇಲ್ಲ
ಪ್ರಾಜೆಕ್ಟೇ ತುಂಬಿದೆ ತಲೆಯಲ್ಲಿ

ಕ್ಲೈಂಟ್ ಮಹಾಶಯನ ಒಲುಮೆಗೆ
ನಾಟಕ ರಂಗವೆ ಸಜ್ಜಾಗಿದೆ ಇಲ್ಲಿ
ಕೃತಕ ನಗೆಯನು ಕೃತಕ ಜೀವನವನ್ನು
ನಡೆಸುವ ಪಾತ್ರ ನಾಟಕದಲ್ಲಿ..

ಚೆನ್ನಾಗಿ ಅಭಿನಯಿಸಿ ಕ್ಲೈಂಟನ ಗೆದ್ದರೆ
ಉಂಟು ಭರ್ತಿ ಭಿಕ್ಷೆಯು ಇಲ್ಲಿ
ಆಗಲೆ ಬೇಕು ಪ್ರತಿಯೊಬ್ಬರೂನೂ
ಕಪಟ ನಾಟಕ ಸೂತ್ರಧಾರಿಗಳಿಲ್ಲಿ

'ನಮಸ್ಕಾರ,ಹೇಗಿದ್ದಿರಾ?' ಪದಗಳ
ಮರೆತಿಹರು ನೋಡಿ ನಮ್ಮವರಿಲ್ಲಿ
'hi,hru?' ಬಂದು ಕೊಂದೆ ಹಾಕಿದೆ
ಆತ್ಮೀಯತೆಯ ಬೆಲೆಯನಿಲ್ಲಿ

ಯಾಕೊ ಅಮ್ಮನ ಮಡಿಲ ನೆನಪಾಯ್ತು
ರೋಸಿ ಹೋದ ಮನಸಿಗೆ ಇಲ್ಲಿ
ಅಮ್ಮನ ಮಾತು ಅವಳ ಕೈ ತುತ್ತು
ಆಹಾ! ಸ್ವರ್ಗವೆ ಕೈಯಲ್ಲಿ

ಬ್ಯಾಟನ್ನು ಹಿಡಿದು ಹಿತ್ತಲಿನಿಂದ
ಶಿಳ್ಳೆ ಹಾಕಿ ಕರೀತಿದ್ದರು ಗೆಳೆಯರು ಆಗ
ಕೆಲಸವಾಯಿತಾ ರಿಸಲ್ಟ್ ಬಂತಾ
ಅಂತ ಪಿಂಗ್ ಮಾಡಿ ಕರೀತಾನೆ ಮ್ಯಾನೇಜರ್ ಈಗ

ಜಿಗಿದ-ಕುಣಿದ-ಆಡಿದ-ನಲಿದ
ಮುಗ್ಧತೆಯ ಆ ದಿನಗಳೆಲ್ಲಿ
ಒಳಗೂ-ಹೊರಗೂ ಜವಾಬ್ದಾರಿಯೇ
ತುಂಬಿರುವ ಈ ದಿನಗಳೆಲ್ಲಿ

ಎಷ್ಟಿದ್ದರೇನು ಆಸ್ತಿ-ಪಾಸ್ತಿ
ಎಷ್ಟಿದ್ದರೇನು ಹಣ-ಸವಲತ್ತು
ಸಾಟಿಯಾದುದೇ ಪ್ರೀತಿ-ಸ್ನೇಹ-ನೆಮ್ಮದಿಗೆ
ಆತ್ಮೀಯರ ಆತ್ಮೀಯತೆಗೆ

ಬಾಲ್ಯಕೆ ಮರಳುವ ಮನಸಾಗುತಿದೆ
ಎಲ್ಲ ಜಂಜಡವ ಕಿತ್ತೆಸೆದು
ನೆಮ್ಮದಿ ಬದುಕನು ಬಯಸಿದೆ ಮನಸು
ಕೃತಕ ವೇಷವ ಬದಿಗೆಸೆದು